ವರದಿಗಾರರು :
ತೌಕೀರ್ ಖತೀಬ್ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
10-11-2025
ಬೆಳಗಾವಿ ಡಿಸಿಸಿ ಬ್ಯಾಂಕ್ ರೇಸ್‌ನಲ್ಲಿ ಜಾರಕಿಹೊಳಿ ಬಣದ ಮೇಲುಗೈ
ಬೆಳಗಾವಿ, ನ.10 – ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಸುತ್ತ ಬೆಳಗಾವಿ ರಾಜಕೀಯ ವಾತಾವರಣ ಕಾವುಗೊಂಡಿದ್ದು, ಜಾರಕಿಹೊಳಿ ಬಣವು ಸಂಪೂರ್ಣ ಹಿಡಿತ ಸಾಧಿಸಿದೆ.
ಶನಿವಾರ ರಾತ್ರಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ಬ್ಯಾಂಕಿನ ನಿರ್ದೇಶಕರ ಸಭೆ ನಡೆಸಿದರು. ಈ ವೇಳೆ ನಾಳೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದ ತಂತ್ರಜ್ಞಾನದ ಬಗ್ಗೆ ಚರ್ಚೆ ನಡೆಯಿತು.
ಜಾರಕಿಹೊಳಿ ಬಣದ 11 ನಿರ್ದೇಶಕರು ಆಯ್ಕೆಯಾಗಿರುವುದರಿಂದ ಸ್ಪಷ್ಟ ಬಹುಮತ ದೊರೆತಿದೆ. ರವಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಂತಿಮ ಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಭ್ಯರ್ಥಿಗಳ ಹೆಸರುಗಳನ್ನು ನಿಗದಿಪಡಿಸಲಾಗುವುದು.
ಸಭೆಯಲ್ಲಿ ನಿರ್ದೇಶಕರಾದ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ, ಅಪ್ಪಾಸಾಹೇಬ ಕುಲಗೋಡೆ, ಅರವಿಂದ ಪಾಟೀಲ್, ನೀಲಕಂಠ ಕಪ್ಪಲಗುದ್ದಿ, ವಿರುಪಾಕ್ಷ ಮಾಮನಿ ಸೇರಿದಂತೆ ಹಲವು ಮಂದಿ ಭಾಗವಹಿಸಿದರು.
ತಟಸ್ಥ ಬಣದ ಶಾಸಕರಾದ ಭರಮಗೌಡ ಕಾಗೆ ಮತ್ತು ಗಣೇಶ್ ಹುಕ್ಕೇರಿ ಅವರೂ ಸತೀಶ್ ಜಾರಕಿಹೊಳಿ ಬಣದ ಬೆಂಬಲಕ್ಕೆ ಬರಲಿದ್ದಾರೆ ಎನ್ನಲಾಗಿದ್ದು, ಇದರಿಂದ ಬಣದ ಬೆಂಬಲ ಶಕ್ತಿ 13 ಸ್ಥಾನಗಳಿಗೆ ಏರಲಿದೆ.
ಲಿಂಗಾಯತ ಸಮುದಾಯದ ನಾಯಕರು ಅಧ್ಯಕ್ಷ ಸ್ಥಾನ ಅಲಂಕರಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ ಹಾಗೂ ಅಪ್ಪಾಸಾಹೇಬ ಕುಲಗೋಡೆ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿವೆ. ಉಪಾಧ್ಯಕ್ಷ ಸ್ಥಾನಕ್ಕೆ ನೀಲಕಂಠ ಕಪ್ಪಲಗುದ್ದಿ ಮತ್ತು ಅರವಿಂದ ಪಾಟೀಲ್ ಅವರ ಹೆಸರುಗಳು ಕೇಳಿ ಬರುತ್ತಿವೆ.
ಸೋಮವಾರ ಮುಂಜಾನೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡು, ಮಧ್ಯಾಹ್ನ 3 ಗಂಟೆಯೊಳಗೆ ಫಲಿತಾಂಶ ಪ್ರಕಟಗೊಳ್ಳಲಿದೆ. ಸರ್ಕಾರದಿಂದ ನಾಮಕರಣಗೊಂಡಿರುವ ರಾಮದುರ್ಗ ಶಾಸಕ ಅಶೋಕ ಪಟ್ಟಣ, ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಹಾಗೂ ಬೆಳಗಾವಿ ಉಪ ನಿಬಂಧಕರು ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಅವರ ಬಣವು ಸಂಪೂರ್ಣ ಬಹುಮತವನ್ನು ಪಡೆದಿರುವುದರಿಂದ, ಎರಡೂ ಹುದ್ದೆಗಳಲ್ಲಿ ಅವರ ಬಣದವರೇ ಅಧಿಕಾರ ಹಿಡಿಯುವ ಸಾಧ್ಯತೆ ಖಚಿತವಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
