ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
27-11-2025
ಬೀದರ್: ಬೀಜ ಮಸೂದೆ 2025 ಮತ್ತು ಕಾರ್ಮಿಕ ಸಂಹಿತೆ ವಿರೋಧಿ ಭಾರೀ ಪ್ರತಿಭಟನೆ
ಬೀದರ್: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಬೀಜ ಮಸೂದೆ 2025 ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ರೈತ–ಕಾರ್ಮಿಕ ಸಂಘಟನೆಗಳು ಬುಧವಾರ ಬೀದರ್‌ನಲ್ಲಿ ಭಾರೀ ಪ್ರತಿಭಟನೆ ನಡೆಸಿದವು. ಈ ಪ್ರತಿಭಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಲವಾರು ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ರಾಷ್ಟ್ರಪತಿ ಹಾಗೂ ಕರ್ನಾಟಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಂಘಟನೆಗಳು, ಬೀಜ ಮಸೂದೆ 2025 ಪಾರಂಪರಿಕ ಬೀಜ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ರೈತರನ್ನು ಕಾರ್ಪೋರೇಟ್ ಬೀಜ ಕಂಪನಿಗಳ ಮೇಲೆ ಅವಲಂಬಿತ ಮಾಡುತ್ತದೆ ಎಂದು ಆಕ್ಷೇಪಿಸಿದರು.
ಸಂಘಟನೆಗಳು ಹೊಸ ಆರ್ಥಿಕ ನೀತಿ ಹಾಗೂ ಒಪ್ಪಂದಗಳ ಪರಿಣಾಮವಾಗಿ ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಬಿಕ್ಕಟ್ಟಿಗೆ ಸಿಲುಕಿರುವುದನ್ನು ಗಮನಕ್ಕೆ ತಂದರು. ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿ ಮತ್ತು ಕಂಪನಿ ಮಾಲೀಕರ ಪರವಾಗಿದ್ದು, ಹಿಂದಿನ 29 ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿರುವುದು ತೀವ್ರ ವಿರೋಧಕ್ಕಿಳಿಯಿತು. ಸಭೆಯಲ್ಲಿ, ಕೃಷಿ ವಲಯದ ಬಿಕ್ಕಟ್ಟಿನಿಂದ ದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಉಲ್ಲೇಖಿಸಲಾಯಿತು. ಸಂಘಟನೆಗಳ ಪ್ರಮುಖ ಹಕ್ಕೋತ್ತಾಯಗಳಂತೆ, ಬೀಜ ಮಸೂದೆ 2025 ಅನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು. ಜೊತೆಗೆ, ಕಾರ್ಮಿಕ ವೇತನ ಸಂಹಿತೆ, ಕೈಗಾರಿಕಾ ಸಂಬಂಧ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ ಹಾಗೂ ವೃತ್ತಿಪರ ಸುರಕ್ಷತೆ ಸಂಹಿತೆಗಳನ್ನು ರದ್ದುಪಡಿಸಿ ಹಿಂದಿನ 29 ಕಾರ್ಮಿಕ ಕಾಯ್ದೆಗಳನ್ನು ಮರು ಜಾರಿಗೆ ತರಬೇಕೆಂದು ಕೋರಲಾಗಿತ್ತು
ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖ ನಾಯಕರು: ಬಾಬುರಾವ್ ಹೊನ್ನಾ, ಮಲ್ಲಿಕಾರ್ಜುನ ಸ್ವಾಮಿ, ನಜೀರ್ ಅಹ್ಮದ್, ಎಂ.ಡಿ. ಖಮರ್ ಪಟೇಲ್, ಶೇಖ್ ನವಾಜ್, ಜೈಶೀಲಕುಮಾರ, ವೀರಶೆಟ್ಟಿ ವಟಂಬೆ, ರಾಮಣ್ಣ ಅಲಮಾಸಪೂರ, ಪ್ರಭು ತಗಣಿಕರ್, ಶ್ರೀಮತಿ ಶೀಲಾ ಸಾಗರ, ಚಾಂದೋಬಾ ಭೋಸ್ಲೆ, ಖದೀರಮಿಯ್ಯಾ, ಶಿವಾಜಿ ಮುಲಾರಿ, ಬಸವರಾಜ ಪಾಟೀಲ್ ಸೇರಿದಂತೆ ಅನೇಕ ರೈತ–ಕಾರ್ಮಿಕ ಸಂಘಟನೆಗಳ ನಾಯಕರು.
