ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
04-05-2025
ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS!
ಬೆಂಗಳೂರು: ಶನಿವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಡೆವಾಲ್ಡ್ ಬ್ರೆವಿಸ್ ಎಲ್‌ಬಿಡಬ್ಲ್ಯೂ ತೀರ್ಪು ಈಗ ಚರ್ಚೆಗೆ ಗ್ರಾಸವಾಗಿದೆ.
ಕೊನೆಯ 24 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 43 ರನ್ ಬೇಕಿತ್ತು. ಕ್ರೀಸ್‌ನಲ್ಲಿ ಜಡೇಜಾ (Ravindra Jadeja) ಮತ್ತು ಧೋನಿ ಇದ್ದರು. ಎರಡನೇ ಎಸೆತದಲ್ಲಿ ಧೋನಿ ಎಲ್‌ಬಿಗೆ ಔಟಾದರು. ಮೂರನೇ ಎಸೆತದಲ್ಲಿ ಕ್ರೀಸಿಗೆ ಬಂದ ಬ್ರೆವಿಸ್ ಪ್ಯಾಡ್‌ಗೆ ಬಾಲ್ ಬಡಿಯಿತು.
ಎನ್‌ಗಿಡಿ ಮನವಿಯ ಬೆನ್ನಲ್ಲೇ ಅಂಪೈರ್ ಔಟ್ ತೀರ್ಪು ನೀಡಿದರು. ಬಾಲ್ ಹಿಂದಕ್ಕೆ ಹೋದ ಕಾರಣ ಬ್ರೆವಿಸ್ ಮತ್ತು ಜಡೇಜಾ ರನ್ ಓಡಿದರು.
ರನ್ ಓಡಿದ ನಂತರ ರಿವ್ಯೂ ಪರಿಶೀಲನೆಗೆ ಮನವಿ ಮಾಡಿದರು. ಆದರೆ ಅಂಪೈರ್ ಈ ಮನವಿಯನ್ನು ಪುರಸ್ಕರಿಸಲಿಲ್ಲ. ಈ ವಿಚಾರಕ್ಕೆ ಜಡೇಜಾ ಅಂಪೈರ್ ಬಳಿ, ಯಾಕೆ ರಿವ್ಯೂ ಪರಿಶೀಲನೆ ಮಾಡಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಅಂಪೈರ್ 15 ಸೆಕೆಂಡ್ ಒಳಗಡೆ ಕೇಳದ ಕಾರಣ ಮನವಿ ಪುರಸ್ಕರಿಸುವುದಿಲ್ಲ ಎಂದು ತಿಳಿಸಿದರು. ಕೊನೆಗೆ ಅಸಮಾಧಾನದಿಂದ ಬ್ರೆವಿಸ್ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ರಿಪ್ಲೈಯಲ್ಲಿ ಬಾಲ್ ವಿಕೆಟ್‌ಗೆ ತಾಗದೇ ಲೆಗ್ ಸೈಡ್‌ಗೆ ಹೋಗುತ್ತಿತ್ತು. ಒಂದು ವೇಳೆ ರನ್ ಓಡದೇ ಡಿಆರ್‌ಎಸ್ (DRS) ತೆಗೆದುಕೊಂಡಿದ್ದರೆ ಬ್ರೆವಿಸ್ ನಾಟೌಟ್ ಆಗುತ್ತಿದ್ದರು. ಬ್ರೆವಿಸ್ ಔಟಾಗದೇ ಇದ್ದರೆ ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆ ಇತ್ತು.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ರೋಚಕ 2 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 5 ವಿಕೆಟ್ ನಷ್ಟಕ್ಕೆ 211 ರನ್ ಹೊಡೆದು ರೋಚಕ ಸೋಲನ್ನು ಅನುಭವಿಸಿತು.
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಇಲ್ಲಿಯವರೆಗೆ ಒಂದೇ ಆವೃತ್ತಿಯಲ್ಲಿ ಎರಡು ಬಾರಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿರಲಿಲ್ಲ. ಮಾರ್ಚ್ 28 ರಂದು ನಡೆದ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳ ಜಯ ಸಾಧಿಸಿತ್ತು. ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 196 ರನ್ ಹೊಡೆದರೆ ಚೆನ್ನೈ 8 ವಿಕೆಟ್ ನಷ್ಟಕ್ಕೆ 146 ರನ್ ಹೊಡೆದಿತ್ತು.
