ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
09-04-2025
ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಸ್ಫೋಟಕ ಶತಕ – ಎಬಿಡಿ, ಕೊಹ್ಲಿ ದಾಖಲೆ ಪುಡಿಗಟ್ಟಿದ 24ರ ಯುವಕ !
ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2025) 18ನೇ ಆವೃತ್ತಿಯಲ್ಲಿ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರಲಾರಂಭಿಸಿವೆ. ಪಂಬಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ತಾನು ಪ್ರವೇಶಿಸಿದ ಚೊಚ್ಚಲ ಆವೃತ್ತಿಯಲ್ಲೇ ಸ್ಫೋಟಕ ಶತಕ ಸಿಡಿಸಿ ದಿಗ್ಗಜರ ದಾಖಲೆಗಳನ್ನ ನುಚ್ಚುನೂರು ಮಾಡಿದ್ದಾರೆ.
ಹೌದು. ಮಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿದ ಟಾಪ್-5 ಬ್ಯಾಟರ್‌ಗಳ ಪಟ್ಟಿ ಸೇರಿದ್ದಾರೆ. ಇದರೊಂದಿಗೆ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ದಾಖಲೆಗಳನ್ನ ಪುಡಿಗಟ್ಟಿದ್ದಾರೆ. ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 43 ಎಸೆತಗಳಲ್ಲಿ ವೇಗದ ಶತಕ ಸಿಡಿಸಿದ್ರೆ, ವಿರಾಟ್ ಕೊಹ್ಲಿ 2016ರಲ್ಲೇ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 47 ಎಸೆತಗಳಲ್ಲಿ ವೇಗದ ಶತಕ ಪೂರೈಸಿದ್ದರು.
ಪಂಜಾಬ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಪ್ರಿಯಾಂಶ್ 19 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಅರ್ಧಶತಕ ಸಿಡಿಸಿದ್ರೆ, 39 ಎಸೆತಗಳಲ್ಲಿ 7 ಬೌಂಡರಿ, 9 ಭರ್ಜರಿ ಸಿಕ್ಸರ್‌ಗಳೊಂದಿಗೆ ಶತಕ ಪೂರೈಸಿದರು. 245.23 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಪ್ರಿಯಾಂಶ್ ಆರ್ಯ ಒಟ್ಟಾರೆ ತಾನು ಎದುರಿಸಿದ 42 ಎಸೆತಗಳಲ್ಲಿ 103 ರನ್ (9 ಸಿಕ್ಸರ್, 7 ಬೌಂಡರಿ) ಬಾರಿಸಿ ಔಟಾದರು. ಇದು ತಾನು ಐಪಿಎಲ್‌ನಲ್ಲಿ ಸಿಡಿಸಿದ ಚೊಚ್ಚಲ ಶತಕವಾಗಿದೆ.
ಐಪಿಎಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿದ ಟಾಪ್-5 ಬ್ಯಾಟರ್ಸ್ : ಕ್ರಿಸ್ ಗೇಲ್ – 30 ಎಸೆತ, ಯೂಸುಫ್ ಪಠಾಣ್ – 37 ಎಸೆಯ, ಡೇವಿಡ್ ಮಿಲ್ಲರ್ – 38 ಎಸೆತ, ಟ್ರಾವಿಸ್ ಹೆಡ್ – 39 ಎಸೆತ, ಪ್ರಿಯಾಂಶ್ ಆರ್ಯ – 39 ಎಸೆತ.
