ವರದಿಗಾರರು :
ನಾ. ಅಶ್ವಥ್ ಕುಮಾರ್, ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
27-11-2025
ವೈಶಿಷ್ಟ್ಯ ಕಾರ್ಯಕ್ರಮಗಳಿಂದ ಗಮನಸೆಳೆದ ಸಂವಿಧಾನ ದಿನಾಚರಣೆ
ವೈಶಿಷ್ಟ್ಯ ಕಾರ್ಯಕ್ರಮಗಳಿಂದ ಗಮನಸೆಳೆದ ಸಂವಿಧಾನ ದಿನಾಚರಣೆ ಜಗತ್ತಿನಲ್ಲಿಯೇ ಭಾರತ ಸಂವಿಧಾನ ಅತ್ಯಂತ ಶ್ರೇಷ್ಠ : ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಚಾಮರಾಜನಗರ, : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಸಂವಿಧಾನವಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಹೇಳಿದರು.
ಚಾಮರಾಜನಗರದ ಪೊಲೀಸ್ ಕವಾಯಿತು ಮೈದಾನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿಂದು ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ಉಪಾÀಸನ ಸ್ವಾತಂತ್ರ್ಯ ಸ್ಥಾನಮಾನ ಹಾಗೂ ಅವಕಾಶ ಸಮಾನತೆಯನ್ನು ಸಂವಿಧಾನವು ಕಲ್ಪಿಸಿಕೊಟ್ಟಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದ ಅಂಬೇಡ್ಕರ್ ಅವರು ಸಂವಿಧಾನದ ಶಿಲ್ಪಿಯಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ಸಂವಿಧಾನವು ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಹಾಗೆಯೇ ಕರ್ತವ್ಯಗಳ ಬಗ್ಗೆಯು ತಿಳಿಸಿದೆ. ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ಅವಕಾಶವನ್ನು ಪ್ರತಿಪಾದಿಸಲಾಗಿದೆ. ವ್ಯಕ್ತಿಗೌರವ, ದೇಶದ ಏಕತೆ, ಸಮಗ್ರತೆ, ಭ್ರಾತುತ್ವದಂತಹ ಮಹತ್ತರ ಅಂಶಗಳು ಸಂವಿಧಾನದಲ್ಲಿ ಅಡಕವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ವಹಿಸಿದ್ದರು ಶಾಸಕ ಎ.ಆರ್. ಕೃಷ್ಣಮೂರ್ತಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸಾಲಾಗಿ ನಿಂತು ಸಂವಿಧಾನ ಪೀಠಿಕೆ, ಸಂವಿಧಾನ ಗ್ರಂಥ ಮಾದರಿಯನ್ನು ರಚಿಸಿ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ದೇಶದ ವಿವಿಧ ರಾಜ್ಯಗಳ ಕಲೆ, ಪರಂಪರೆ ಬಿಂಬಿಸುವ ವೇಷ ಭೂಷಣ ತೊಟ್ಟ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭಿಕರ ಮನಗೆದ್ದರು. ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಯ ಬೃಹತ್ ಪ್ರತಿಕೃತಿಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಸಚಿವರು, ಶಾಸಕರು, ಗಣ್ಯರು ಮಾಲಾರ್ಪಣೆ ಮಾಡಿದರು. ಬಳಿಕ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಜಾಥಾದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವೇಷ ಭೂಷಣ ಧರಿಸಿ ವಿದ್ಯಾರ್ಥಿಗಳು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.
