ವರದಿಗಾರರು :
ಕೆ ಜೆ ಸುರೇಶ ||
ಸ್ಥಳ :
ಹಾಸನ
ವರದಿ ದಿನಾಂಕ :
01-12-2025
ಹಾಸನದಲ್ಲಿ ಲಾರಿ ಮಾಲೀಕರ ಪ್ರತಿಭಟನೆ: ಎಫ್‌ಸಿ ಶುಲ್ಕ ಹೆಚ್ಚಳ ಖಂಡನೆ
ಹಾಸನ: ಲಾರಿಗಳ ಫಿಟ್ನೆಸ್ ಸರ್ಟಿಫಿಕೇಟ್ (ಎಫ್‌ಸಿ) ಶುಲ್ಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿರುವುದನ್ನು ಖಂಡಿಸಿ, ಹಾಸನ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು. ನವೆಂಬರ್ 17ರಿಂದ ಕೇಂದ್ರ ಸರ್ಕಾರ ಎಫ್‌ಸಿ ಶುಲ್ಕವನ್ನು ಹೆಚ್ಚಿಸಿರುವ ಕಾರಣದಿಂದಲೇ ಈಗಾಗಲೇ ಬೆಲೆ ಏರಿಕೆ ಹಾಗೂ ಆರ್ಥಿಕ ಒತ್ತಡವನ್ನು ಎದುರಿಸುತ್ತಿರುವ ಲಾರಿ ಮಾಲೀಕರ ಮೇಲೆ ಹೆಚ್ಚುವರಿ ಭಾರ ಬೀಳುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚಿದ ಶುಲ್ಕವನ್ನು ಭರಿಸುವುದು ಅಸಾಧ್ಯವಾದ ಕಾರಣ, ಇದರಿಂದ ಲಾರಿ ಮಾಲೀಕರು ಮತ್ತು ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಹೊಸ ಶುಲ್ಕವನ್ನು ಹಿಂತೆಗೆದು, ಹಿಂದೆ ಇದ್ದ ಶುಲ್ಕವನ್ನೇ ಮುಂದುವರಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ಕೆ.ಕೆ., ಉಪಾಧ್ಯಕ್ಷ ಶೇಕ್ ಅಹಮ್ಮದ್, ನಿರ್ದೇಶಕ ಮಂಜುನಾಥ್ ಸೇರಿದಂತೆ ಅನೇಕ ಲಾರಿ ಮಾಲೀಕರು ಮತ್ತು ಚಾಲಕರು ಭಾಗವಹಿಸಿದ್ದರು.
