ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
06-10-2025
ಪ್ರೊ. ಮೊಗಳ್ಳಿ ಗಣೇಶ್ ನಿಧನ: ಕನ್ನಡ ಸಾಹಿತ್ಯಕ್ಕೆ ಅಪೂರ್ಣವಾದ ಹಾನಿ
ಬೆಂಗಳೂರು: ಖ್ಯಾತ ಸಾಹಿತಿ, ಹಿರಿಯ ಕತೆಗಾರ ಪ್ರೊ. ಮೊಗಳ್ಳಿ ಗಣೇಶ್ (64) ಭಾನುವಾರ ಅನಾರೋಗ್ಯದಿಂದ ಮನೆಯಲ್ಲಿ ನಿಧನರಾದರು. ಅವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಪ್ರೊ. ಗಣೇಶ್, ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಕಾವ್ಯ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತಿಸಿಕೊಂಡಿದ್ದರು. ಪ್ರಬಲ ದಲಿತ ಚಿಂತಕರಾಗಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಆಹ್ವಾನಿತರಾಗುತ್ತಿದ್ದ ಅವರು, ಹಂಪಿ ವಿಶ್ವವಿದ್ಯಾನಿಲಯದಲ್ಲಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ಸದ್ಯ ಅವರು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು.
ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು ಮುಂತಾದ ಕತೆ ಸಂಕಲನಗಳು ಹಾಗೂ ತೊಟ್ಟಿಲು, ಕಿರೀಟ, ಬೇರು ಎಂಬ ಕಾದಂಬರಿಗಳು ಅವರ ಪ್ರಮುಖ ಸಾಹಿತ್ಯ ಕೃತಿಗಳಾಗಿವೆ. ‘ಕಥನ’ ಎಂಬ ಪ್ರಬಂಧ ಸಂಕಲನ ಮತ್ತು ‘ಸೊಲ್ಲು’, ‘ವಿಮರ್ಶೆ’, ‘ಶಂಬಾ ಭಾಷಿಕ ಸಂಶೋಧನೆ’, ‘ತಕರಾರು’ ಮುಂತಾದ ವಿಮರ್ಶಾ ಕೃತಿಗಳ ಮೂಲಕ ಅವರು ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲೂ ಗಮನ ಸೆಳೆದಿದ್ದರು.
‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಎಂಬ ಚಿಂತನ ಕೃತಿಯ ಮೂಲಕ ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳನ್ನು ಹೊತ್ತು ತಂದು, ಸಮಾಜಕ್ಕೆ ದಾರಿದೀಪದಂತೆ ಇದ್ದರು.
ಇವರ ಅನೇಕ ಕೃತಿಗಳು ಅನುವಾದಗೊಂಡು ಇತರ ಭಾಷೆಗಳಲ್ಲಿ ಸಾಹಿತ್ಯ ಪ್ರಿಯರ ಗಮನ ಸೆಳೆದಿವೆ. ಇತರ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಪ್ರೊ. ಮೊಗಳ್ಳಿ ಗಣೇಶ್ ಅವರ ಸಾಂಸ್ಕೃತಿಕ, ಸಾಹಿತ್ಯ ಸೇವೆಯು ಸದಾ ನೆನಪಿನಲ್ಲಿರಲಿದೆ. ಅವರ ಸಾವಿನ ಸುದ್ದಿಯಿಂದ ಕನ್ನಡ ಸಾಹಿತ್ಯ ಪ್ರೇಮಿಗಳು ಗಾಢ ಶೋಕದಲ್ಲಿದ್ದಾರೆ.
