ವರದಿಗಾರರು :
ನಾ.ಅಶ್ವಥ್ ಕುಮಾರ್, ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
25-11-2025
ರಸ್ತೆ ಅಭಿವೃದ್ಧಿ ವಿಫಲ: ದೊಡ್ಡಿಂದುವಾಡಿ–ಸಿಂಗನಲ್ಲೂರು ರೈತರಿಂದ ಭಿಕ್ಷೆ ಚಳುವಳಿ
ಚಾಮರಾಜನಗರ: ಗ್ರಾಮೀಣ ಭಾಗ ಹಾಗೂ ಗುಂಡಾಲ್ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಹಲವಾರು ಬಾರಿ ಮನವಿ ಮಾಡಿದರೂ ಅಭಿವೃದ್ಧಿ ಪಡಿಸಲು ವಿಫಲವಾದ ಶಾಸಕ ಹಾಗೂ ಸಂಬಂಧಪಟ್ಟ ಇಲಾಖೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಮತ್ತು ಸಿಂಗನಲ್ಲೂರು ಶಾಖೆಗಳ ರೈತರು ಭಿಕ್ಷೆ ಎತ್ತುವ ಚಳುವಳಿ ನಡೆಸಿದರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ, ಸಿಂಗನಲ್ಲೂರು ಮತ್ತು ದೊಡ್ಡಿಂದುವಾಡಿ ಪ್ರದೇಶಗಳಲ್ಲಿ ರೈತರು ಬೇಡಿಕೆಯೊಂದಿಗೆ ಮನೆಮನೆಗೆ ತೆರಳಿ ಭಿಕ್ಷೆ ಸಂಗ್ರಹಿಸಿ, ಬಳಿಕ ದೊಡ್ಡಿಂದುವಾಡಿ ಗ್ರಾಮದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಎಇ ಸುರೇಂದ್ರ, ಜಿಲ್ಲಾ ಪಂಚಾಯಿತಿ ಉಪವಿಭಾಗ ಎಇಇ ಕುಮಾರ್, ಇಂಜಿನಿಯರ್ ಮಂಜು, ಕಬಿನಿ ಇಲಾಖೆಯ ಎಇ ರಾಮಕೃಷ್ಣ ಹಾಗೂ ಪಿಡಿಒ ಮರಿಸ್ವಾಮಿ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಮಧುವನಹಳ್ಳಿ ಬಸವರಾಜು, ಅಣಗಳ್ಳಿ ಘಟಕದ ಕೀರ್ತಿ, ಲಾರೆನ್ಸ್, ತಾಲ್ಲೂಕು ಯುವ ಘಟಕ ಅಧ್ಯಕ್ಷ ವಾಸು, ದೊಡ್ಡಿಂದುವಾಡಿ ಘಟಕದ ವಸಂತ ಕುಮಾರ್, ಸುರೇಂದ್ರ, ಮನುಗೌಡ, ರವಿ, ನಾಗೇಂದ್ರ, ಶಿವರಾಮ್, ಗೋವಿಂದರಾಜು, ನಂದೀಶ್, ಅಬ್ದುಲ್ ಖಾದೀರ್, ಸಿಂಗನಲ್ಲೂರು ಘಟಕ ಅಧ್ಯಕ್ಷ ಬೆಟ್ಟೇಗೌಡ, ಆರ್. ಅರುಪದರಾಜ್, ಜಾನ್ ಜೋಸೆಫ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಭಿಕ್ಷೆ ಚಳುವಳಿಯಲ್ಲಿ ರೈತರು ಒಟ್ಟು ₹3,555 ಸಂಗ್ರಹಿಸಿದ್ದು, ಅದರಲ್ಲಿ ಲೋಕೋಪಯೋಗಿ, ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ಇಲಾಖೆಗೆ ತಲಾ ₹1,185 ನೀಡಿ ಸರ್ಕಾರಕ್ಕೆ ಹಿಂತಿರುಗಿಸಲು ಮುಂದಾದರೂ, ಅಧಿಕಾರಿಗಳು ಮೊತ್ತವನ್ನು ಸ್ವೀಕರಿಸಲು ನಿರಾಕರಿಸಿದ ಪ್ರಸಂಗ ನೆಡೆಯಿತು
