“ಸದೃಢ ಆರೋಗ್ಯಕ್ಕೆ ಜೀವನಶೈಲಿ ಬದಲಾವಣೆ ಅಗತ್ಯ” — ಬಳ್ಳಾರಿ ಪಾಲಿಕೆ ಆಯುಕ್ತ ಮಂಜುನಾಥ
ಬಳ್ಳಾರಿ: “ಮಧುಮೇಹ ನಿಯಂತ್ರಣಕ್ಕೆ ಜೀವನಶೈಲಿ ಬದಲಾವಣೆ ಅತ್ಯವಶ್ಯ,” ಎಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಹೇಳಿದರು. ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಗರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೋಮವಾರ ನಡೆದ ಜನಜಾಗೃತಿ ವಾಕ್ ಮ್ಯಾರಥಾನ್‌ಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ನಿತ್ಯ ವ್ಯಾಯಾಮದ ಕೊರತೆ ಮತ್ತು ಅಸಮತೋಲನ ಆಹಾರ ಸೇವನೆಯಿಂದ ಮಧುಮೇಹ ಪ್ರಕರಣಗಳು ಹೆಚ್ಚುತ್ತಿದ್ದು, ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಜಾಗೃತರಾಗಬೇಕಿದೆ ಎಂದು ಸಲಹೆ ನೀಡಿದರು. “ಮಧುಮೇಹ ಬಂದ ಮೇಲೆ ಚಿಕಿತ್ಸೆಗಿಂತ ಬರದಂತೆ ತಡೆಯುವುದು ಉತ್ತಮ,” ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು, ಜಿಲ್ಲೆಯ 20% ಕ್ಕೂ ಹೆಚ್ಚು ಜನರು ಮಧುಮೇಹ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ಗೃಹ-ಆರೋಗ್ಯ ಯೋಜನೆಯಡಿ ಮನೆಮನೆಗೆ ತೆರಳಿ ತಪಾಸಣೆ ಹಾಗೂ ಉಚಿತ ಔಷಧೋಪಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ ಅವರು, “ಪ್ರತಿ ಐದು ಜನರಲ್ಲಿ ಒಬ್ಬರಿಗೆ ಮಧುಮೇಹ ಇರುವ ಕಾಲ ಇದು. ಸರಿಯಾದ ಡಯಟ್ ಮತ್ತು ವ್ಯಾಯಾಮದ ಮೂಲಕ ನಿಯಂತ್ರಣ ಸಾಧ್ಯ,” ಎಂದು ಹೇಳಿದರು.
ಜಿಲ್ಲಾ ಅಸಾಂಕ್ರಾಮಿಕ ರೋಗಗಳಾಧಿಕಾರಿ ಡಾ. ವೀರೇಂದ್ರ ಕುಮಾರ್ ಕೆ.ಜಿ ಅವರು ಸಮತೋಲನ ಆಹಾರ, ಉತ್ತಮ ನಿದ್ರೆ ಮತ್ತು ತೂಕ ನಿಯಂತ್ರಣ ಮಧುಮೇಹ ತಡೆಗೆ ಮುಖ್ಯ ಅಂಶವೆಂದರು.
ಜಾಗೃತಿ ಜಾಥಾ ಮಾರ್ಗ: ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ → ಸಂಗಾ ವೃತ್ತ → ಗಡಿಗಿ ಚೆನ್ನಪ್ಪ ವೃತ್ತ → ಜಿಲ್ಲಾಧಿಕಾರಿಗಳ ಕಚೇರಿ → ಹೆಚ್.ಆರ್. ಗವಿಯಪ್ಪ ವೃತ್ತ → ಮತ್ತೆ ಗಡಿಗಿ ಚೆನ್ನಪ್ಪ ವೃತ್ತ → ಆರೋಗ್ಯಾಧಿಕಾರಿಗಳ ಕಚೇರಿ.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯಾಧಿಕಾರಿಗಳು ಹಾಗೂ ಬಳ್ಳಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು