ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ
ಭಾರತ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿಯ ಕೈಟ್ವಾಲಿಯಾ ಗ್ರಾಮದಲ್ಲಿ ವಿಶ್ವದ ಅತಿದೊಡ್ಡ ಏಕ ಶಿವಲಿಂಗವನ್ನು ಅಧಿಕೃತವಾಗಿ ಪ್ರತಿಷ್ಠಾಪಿಸುವ ಮೂಲಕ ದೇಶವು ಐತಿಹಾಸಿಕ ದಾಖಲೆಗೆ ನಾಂದಿ ಹಾಡಿದೆ.
ವಿರಾಟ್ ರಾಮಾಯಣ ದೇವಾಲಯ ಆವರಣದಲ್ಲಿ ನಡೆದ ಈ ಭವ್ಯ ಶಿವಲಿಂಗ ಪ್ರತಿಷ್ಠಾಪನಾ ಸಮಾರಂಭವು ಅಪಾರ ಧಾರ್ಮಿಕ ವೈಭವಕ್ಕೆ ಸಾಕ್ಷಿಯಾಯಿತು. ವಾರಣಾಸಿ ಹಾಗೂ ಅಯೋಧ್ಯೆಯಿಂದ ಆಗಮಿಸಿದ ಪಂಡಿತರು ವೇದಮಂತ್ರಗಳ ಪಠಣದೊಂದಿಗೆ ಶಿವಲಿಂಗದ ಪ್ರಾಣ ಪ್ರತಿಷ್ಠೆ ನೆರವೇರಿಸಿದರು. ವಿಶೇಷ ಪೂಜೆಗಳು ನಡೆಯಿದ್ದು, ಸಮಾರಂಭದ ಭಾಗವಾಗಿ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆಯನ್ನೂ ಸುರಿಸಲಾಯಿತು.
210 ಮೆಟ್ರಿಕ್ ಟನ್ ಶಿವಲಿಂಗ ಈ ಶಿವಲಿಂಗವು ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದು, ಇದರ ಎತ್ತರ 33 ಅಡಿ ಮತ್ತು ತೂಕ ಸುಮಾರು 210 ಮೆಟ್ರಿಕ್ ಟನ್ ಆಗಿದೆ. ಇದು ಜಗತ್ತಿನಲ್ಲೇ ಅತಿದೊಡ್ಡ ಏಕ ಶಿವಲಿಂಗ ಎಂದು ಹೇಳಲಾಗುತ್ತಿದೆ. ಈ ಬೃಹತ್ ಶಿವಲಿಂಗವನ್ನು ಸ್ಥಾಪಿಸಲು ಎರಡು ದೊಡ್ಡ ಕ್ರೇನ್‌ಗಳ ಸಹಾಯವನ್ನು ಪಡೆದುಕೊಳ್ಳಲಾಗಿತ್ತು.
ಶಿವಲಿಂಗ ಪ್ರತಿಷ್ಠಾಪನೆಯ ನಂತರ, ದೇಶದ ಹಲವು ಪವಿತ್ರ ನದಿಗಳ ನೀರನ್ನು ಬಳಸಿ ಭೋಲೆನಾಥನಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಈ ಮಹಾ ಕಾರ್ಯಕ್ರಮದಲ್ಲಿ ಅನೇಕ ಸಂತರು, ಋಷಿಗಳು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಸಹಸ್ರ ಲಿಂಗಗಳ ವಿಶೇಷತೆ ಈ ಮಹಾ ಶಿವಲಿಂಗದ ಮತ್ತೊಂದು ವಿಶೇಷತೆ ಎಂದರೆ, ಇದರೊಂದಿಗೆ 1008 ಸಣ್ಣ ಶಿವಲಿಂಗಗಳು ಕೂಡ ಸೇರಿವೆ. ಇವುಗಳನ್ನು ಒಟ್ಟಾಗಿ ಸಹಸ್ರ ಶಿವಲಿಂಗ ಎಂದು ಕರೆಯಲಾಗುತ್ತದೆ. ಇದಕ್ಕೂ ಮೊದಲು ತಮಿಳುನಾಡಿನ ಮಹಾಬಲಿಪುರಂನಲ್ಲಿ ಸಹಸ್ರ ಶಿವಲಿಂಗ ರಚನೆಯಾಗಿತ್ತು. ಆದರೆ, ಗಾತ್ರ ಮತ್ತು ತೂಕದ ದೃಷ್ಟಿಯಿಂದ ಕೈಟ್ವಾಲಿಯಾ ಶಿವಲಿಂಗವು ವಿಶಿಷ್ಟ ದಾಖಲೆ ನಿರ್ಮಿಸಿದೆ.
ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯವು 120 ಎಕರೆ ವಿಸ್ತೀರ್ಣದಲ್ಲಿ ರೂಪುಗೊಳ್ಳುತ್ತಿದೆ. ಪೂರ್ಣಗೊಂಡ ನಂತರ, ಇದರ ಮುಖ್ಯ ಶಿಖರವು 270 ಅಡಿ ಎತ್ತರ ಹೊಂದಿರಲಿದೆ. ಇದು ಅಯೋಧ್ಯೆಯ ರಾಮ ಮಂದಿರ ಹಾಗೂ ದೆಹಲಿಯ ಕುತುಬ್ ಮಿನಾರ್‌ಗಿಂತಲೂ ಎತ್ತರವಾಗಿರಲಿದೆ.
ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ, ವಿರಾಟ್ ರಾಮಾಯಣ ದೇವಾಲಯವು ದೇಶದಷ್ಟೇ ಅಲ್ಲದೆ ಜಗತ್ತಿನಲ್ಲಿಯೇ ಒಂದು ಅದ್ಭುತ ಧಾರ್ಮಿಕ ತಾಣವಾಗಿ ಗುರುತಿಸಿಕೊಳ್ಳಲಿದೆ. ಜಗತ್ತಿನ ಅತಿದೊಡ್ಡ ಶಿವಲಿಂಗ ಸ್ಥಾಪನೆಯೊಂದಿಗೆ ಭಾರತವು ತನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಮೆರೆದಿದೆ.
ಇತರೆ ಸುದ್ದಿಗಳು