ವರದಿಗಾರರು :
ಮುತ್ತುರಾಜ್ ||
ಸ್ಥಳ :
ಕೊರಟಗೆರೆ
ವರದಿ ದಿನಾಂಕ :
25-11-2025
ಕೊರಟಗೆರೆ: ವಿದ್ಯಾರ್ಥಿ ಜೀವನದ ಅತ್ಯುತ್ತಮ ಪಾಠ ಎನ್ಎಸ್ಎಸ್ ಶಿಬಿರ — ರಕ್ಷಿತಾ ವೀರಕ್ಯಾತರಾಯ
ಕೊರಟಗೆರೆ: “ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಒಮ್ಮೆ ಎನ್ಎಸ್ಎಸ್ ಶಿಬಿರಕ್ಕೆ ಹಾಜರಾಗಲೇಬೇಕು. ಇದು ಪಠ್ಯ ಪುಸ್ತಕದ ಜ್ಞಾನಕ್ಕಿಂತಲೂ ಜೀವನ ಮೌಲ್ಯಗಳನ್ನು ಕಲಿಸುವ ಅನನ್ಯ ಪಾಠಶಾಲೆ ಎಂದು ವಡ್ಡಗೆರೆ ಗ್ರಾ.ಪಂ ಅಧ್ಯಕ್ಷೆ ರಕ್ಷಿತಾ ವೀರಕ್ಯಾತರಾಯ ಹೇಳಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ವತಿಯಿಂದ ವಡ್ಡಗೆರೆ ಗ್ರಾಮದಲ್ಲಿ ಆಯೋಜಿಸಲಾದ 7 ದಿನಗಳ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮತ್ತು ಸಮಾಜ ಪರಿವರ್ತನೆಗೆ ಪಣತೊಟ್ಟು ಮುಂದಾಗಬೇಕೆಂದು ಕರೆ ನೀಡಿದರು. ಶಿಬಿರವು ಸಹಜೀವನ, ಶಿಸ್ತು, ಸಮಾಜಜ್ಞಾನ ಮತ್ತು ಕರ್ತವ್ಯಬೋಧನೆ ನೀಡುವ ಜೀವನಪಾಠವಾಗಿದೆ, ಶಿಬಿರಕ್ಕೆ ಗ್ರಾಮ ಪಂಚಾಯತಿ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಗ್ರಾ.ಪಂ ಉಪಾಧ್ಯಕ್ಷ ನರೇಂದ್ರ ಬಾಬು ಮಾತನಾಡಿ “ಎನ್ಎಸ್ಎಸ್ ಶಿಬಿರ ಒಂದು ಬಗೆಗಿನ ತಪ್ಪು ಕಲ್ಪನೆಯಿದೆ, ಅಲ್ಲಿ ಮಕ್ಕಳಿಗೆ ಕೇವಲ ಕೆಲಸ ಮಾಡಿಸುತ್ತಾರೆ ಎಂಬ ಅಭಿಪ್ರಾಯ ಬೇಡ,ಇಲ್ಲಿ ವಿದ್ಯಾರ್ಥಿಗಳು ಪುಸ್ತಕದಲ್ಲಿಲ್ಲದ ಅನೇಕ ಮೌಲ್ಯ ಪಾಠಗಳನ್ನು ಅನುಭವದ ಮೂಲಕ ಕಲಿಯುತ್ತಾರೆ, ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ನೇ. ರಂ. ನಾಗರಾಜು, ವಿದ್ಯಾರ್ಥಿಗಳು ಮೊಬೈಲ್ ದೂರವಿಟ್ಟು ಮನುಷ್ಯ-ಸಂಗಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಮೂಹದಲ್ಲಿ ಬದುಕುವ ಗುಣ,ಸೋದರತ್ವ ಮತ್ತು ಒಟ್ಟಾಗಿ ಕೆಲಸ ಮಾಡುವ ಶಕ್ತಿ ಎನ್ಎಸ್ಎಸ್ ಶಿಬಿರದಲ್ಲಿ ಬೆಳೆಸಿಕೊಳ್ಳಬಹುದಾದ ಮಹತ್ವದ ಗುಣಗಳು ಎಂದರು. ಶಿಬಿರದ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಪಿ. ವಿಜಯಶಂಕರ್, ಉಪನ್ಯಾಸಕ ಡಾ. ಸುಗ್ಗಯ್ಯ, ನಿವೃತ್ತ ಪಶುವೈದ್ಯಾಧಿಕಾರಿ ಡಾ. ರಾಮಚಂದ್ರಪ್ಪ, ಉದ್ಯಮಿ ಕೈ.ಗಾ. ನಾಗರಾಜು ಸೇರಿದಂತೆ ಹಲವು ಗಣ್ಯರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿಗಳಾಗಿ ವಡ್ಡಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜ್ ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಂ. ರುದ್ರೇಶ್, ಮುಖಂಡ ವೀರಕ್ಯಾತರಾಯ, ಶಿಬಿರಾಧಿಕಾರಿ ನಂಜುಂಡಪ್ಪ,ಉಪನ್ಯಾಸಕರಾದ ಗಿರೀಶ್, ಜ್ಯೋತಿಬಾಯಿ ಹಾಗೂ ಸ್ಥಳೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.( ಚಿತ್ರ ಇದೆ ಬಳಸಿ ) ಚಿತ್ರ : ಎನ್ ಎಸ್ ಎಸ್ ಶಿಬಿರ ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಕ್ಷಿತಾ, ಕಾಲೇಜು ಪ್ರಾಂಶುಪಾಲ ನಾಗರಾಜು, ಸೇರಿದಂತೆ ಇತರರು.
