ತಾಳಿಕೋಟೆ : ದಸರಾ ರಜೆ ಅವಧಿಯಲ್ಲಿ ಸಮೀಕ್ಷಾ ಕಾರ್ಯ ಮುಂದೂಡುವಂತೆ ಮನವಿ
ತಾಳಿಕೋಟೆ ಪಟ್ಟಣದಲ್ಲಿ ಶನಿವಾರ ವಿವಿಧ ಸಂಘಟನೆಗಳ ವತಿಯಿಂದ ಸ್ಥಳೀಯ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ದಸರಾ ರಜಾ ಅವಧಿಯಲ್ಲಿ ಸರ್ಕಾರ ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಮುಂದೂಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಬಿರಾದಾರರು, “ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7 ರವರೆಗೆ ಇರುವ ದಸರಾ ರಜಾ ಅವಧಿಯಲ್ಲಿ ಶಿಕ್ಷಕರನ್ನು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಶಿಕ್ಷಕರಿಗೆ ವಿಶ್ರಾಂತಿಯಿಲ್ಲದೆ ಗೋಳಾಡುವಂತಾಗಿದೆ. ದಸರಾ ಹಾಗೂ ದೀಪಾವಳಿ ಹಬ್ಬಗಳು ಕುಟುಂಬ ಸಮೇತ ಸಂಭ್ರಮಿಸಲು, ಮನೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇರುವ ಅವಕಾಶವನ್ನು ಕಸಿದುಕೊಳ್ಳಲಾಗಿದೆ,” ಎಂದು ಹೇಳಿದರು. ಅವರು ಮುಂದುವರಿಸಿ, ಬೇರೆ ಜಿಲ್ಲೆಗಳಿಂದ ಬಂದು ಸೇವೆ ಸಲ್ಲಿಸುತ್ತಿರುವ ಅನೇಕ ಶಿಕ್ಷಕರು ತಮ್ಮ ಊರಿಗೆ ತೆರಳಿ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಲು ಬಯಸುತ್ತಾರೆ. ಆದರೆ ರಜಾ ಅವಧಿಯಲ್ಲಿ ಗಣತಿ ಕಾರ್ಯ ಹೇರಿಕೆಯಾಗಿರುವುದು ಶಿಕ್ಷಕರಲ್ಲಿ ನಿರುತ್ಸಾಹ ಮೂಡಿಸಿದೆ. ಆದ್ದರಿಂದ ಶಾಲೆಗಳು ಪುನರಾರಂಭವಾದ ನಂತರವೇ ಸಮೀಕ್ಷಾ ಕಾರ್ಯ ಕೈಗೊಳ್ಳುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಮನವಿ ಅರ್ಪಣಾ ಕಾರ್ಯಕ್ರಮದಲ್ಲಿ ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ.ಬಡಿಗೇರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ.ವಜ್ಜಲ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಬೀರಗೊಂಡ, ಶಿಕ್ಷಕರ ಸೊಸೈಟಿ ಅಧ್ಯಕ್ಷ ಸುರೇಶ ವಾಲಿಕಾರ, ಎನ್.ಜಿ.ಓ ನಿರ್ದೇಶಕ ಶಂಕರಗೌಡ ಬಿರಾದಾರ ಸೇರಿದಂತೆ ಅನೇಕ ಸಂಘಟನಾ ಪ್ರತಿನಿಧಿಗಳು ಹಾಜರಿದ್ದರು
ಇತರೆ ಸುದ್ದಿಗಳು