ವರದಿಗಾರರು :
ಫಯಾಜ್ ತೇಲಿ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
29-11-2025
ಗುರುಮಠಕಲ್‌ನಲ್ಲಿ ₹26.60 ಕೋಟಿ ಸೋಲಾರ್ ಹೈಮಾಸ್ಟ್ ಹಗರಣ ಆರೋಪ — K.R.S ಪಕ್ಷದ ವಿನೂತನ ಪ್ರತಿಭಟನೆ
ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ 2024–25ನೇ ಸಾಲಿನ ಕೆ.ಕೆ.ಆರ್.ಡಿ.ಬಿ. (KKRDB) ಮೈಕ್ರೋ ಮತ್ತು ಸಾಮಾನ್ಯ ಯೋಜನೆ ಅಡಿ ಅಳವಡಿಸಲಾದ 226 ಸೋಲಾರ್ ಹೈಮಾಸ್ಟ್ ಕಂಬಗಳ ನಿರ್ಮಾಣ ಕಾಮಗಾರಿಯಲ್ಲಿ ಭಾರೀ ಮಟ್ಟದ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (K.R.S.) ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ. ಒಟ್ಟು ₹26 ಕೋಟಿ 60 ಲಕ್ಷ ವೆಚ್ಚದ ಈ ಯೋಜನೆಯಲ್ಲಿ ಪ್ರತಿ ಹೈಮಾಸ್ಟ್‌ಗೆ ₹10 ಲಕ್ಷ ಎಂದು ಅಂದಾಜಿಸಲಾಗಿದೆಯಾದರೂ, ನೆಲಮಟ್ಟದಲ್ಲಿ ಆಗಿರುವ ಕಾಮಗಾರಿ ಈ ಮೊತ್ತಕ್ಕೆ ಹೊಂದಿಕೆಯಾಗುವುದಿಲ್ಲವೆಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಕಾಮಗಾರಿಯಲ್ಲಿ ಹೊರಬಿದ್ದ ಅವ್ಯವಹಾರಗಳು ಅನೇಕ ಕಡೆ ನಾಮಫಲಕಗಳಲ್ಲಿ ಅಂದಾಜು ಮೊತ್ತ ಹಾಗೂ ಏಜೆನ್ಸಿ ಹೆಸರು ಉಲ್ಲೇಖಿಸದೇ ಬಿಟ್ಟಿದ್ದಾರೆ. ಸೈದಾಪೂರ ಬಸ್ ನಿಲ್ದಾಣದಲ್ಲಿ ಮಾತ್ರ ₹10 ಲಕ್ಷ ವೆಚ್ಚವೆಂದು ಪೆನ್‌ನಿಂದ ಬರೆದಿರುವುದು, ಯೋಜನೆಯ ಪ್ರಾಮಾಣಿಕತೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ. ಕೆಲವು ಸ್ಥಳಗಳಲ್ಲಿ ನಾಮಫಲಕಗಳನ್ನು ಹರಿದು ಹಾಕಿರುವುದು ಸಂಶಯಾಸ್ಪದವಾಗಿದೆ. ಸ್ಥಳ ಪರಿಶೀಲನೆ ನಡೆಸಿದಾಗ ₹10 ಲಕ್ಷ ಮೌಲ್ಯದ ಕಾಮಗಾರಿ ಆಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿರುವ ಗ್ರಾಮಗಳನ್ನು ಕಡೆಗಣಿಸಿ, ಹಣ ದುರ್ಬಳಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಎಸ್ಸೈಟಿ ತನಿಖೆಗಾಗಿ ಮನವಿ ಪ್ರತಿಭಟನಾಕಾರರು ಯಾದಗಿರಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದು, ಅಂದಾಜು ಪತ್ರಿಕೆ, ಬಿಲ್ ತಯಾರಿಸಿದ ಅಧಿಕಾರಿಗಳ ವಿರುದ್ಧ ಎಸ್.ಐ.ಟಿ. ಮೂಲಕ ಉನ್ನತ ಮಟ್ಟದ ತನಿಖೆ ನಡೆಸಬೇಕು, ನಿಧಿಯನ್ನು ದುರ್ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಗುಣಮಟ್ಟದಂತೆ ಕೆಲಸ ಮಾಡದೇ ಇರುವ ಹೈಮಾಸ್ಟ್‌ಗಳನ್ನು ಮರುಗೌಣಮಟ್ಟದಿಂದ, ನಿಜವಾದ ₹10 ಲಕ್ಷ ವೆಚ್ಚದಲ್ಲೇ ಪುನಃ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದವರು ಈ ಪ್ರತಿಭಟನೆಯನ್ನು ಎಸ್. ನಿಜಲಿಂಗಪ್ಪ ಪೂಜಾರಿ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಗುರುಮಠಕಲ್ ಪರಾಜಿತ MLA ಅಭ್ಯರ್ಥಿ, ಜಗನಾಥ್ ಎಸ್. ಚಿಂತನಹಳ್ಳಿ (ಜಿಲ್ಲಾಧ್ಯಕ್ಷರು), ವೀರೇಶ್ ಸಜ್ಜನ್ (ಜಯ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷರು) ಮುಖ್ಯವಾಗಿ ನೇತೃತ್ವ ವಹಿಸಿದ್ದರು. ಇದೆಂತೆ ಆಂಜನೇಯ ಕಟ್ಟಿಮನಿ, ವಿಜಯ್ ಕಂದಳ್ಳಿ, ಜಯವಂತ ದಳಪತಿ, ಅನುರಾಧ ನಾಗರಬಂಡ, ಕಥಲ್ ಸಾಬ್, ಚಾಂದ್ ಪಾಶ ಯಲ್ಲಪ, ಶಿವರಾಜ್ ರಟ್ನಾಡಗಿ, ಸಿದ್ದು ನಾಯಕ್, ಶಾಂತರಾಜ್ ಯಲಸತಿ, ಶ್ರೀಶೈಲ ಬಾಗಿಲಿ, ಮಣಿಕಂಠ ನಾಟಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
