ವರದಿಗಾರರು :
ಬಿ.ಎಂ. ಮಹೇಶ್ ಕುಮಾರ್ ||
ಸ್ಥಳ :
, ಬಳ್ಳಾರಿ
ವರದಿ ದಿನಾಂಕ :
01-12-2025
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊಸ ಎಂಆರ್‌ಐ ಸ್ಕ್ಯಾನಿಂಗ್ ಕೇಂದ್ರ ಉದ್ಘಾಟನೆ
ಬಳ್ಳಾರಿ: “ನಮ್ಮ ದೇಹವೇ ದೇಗುಲ; ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು,” ಎಂದು ಬಳ್ಳಾರಿ ಲೋಕಸಭಾ ಸದಸ್ಯ ಈ. ತುಕಾರಾಮ್ ಅವರು ಹೇಳಿದರು. ಅವರು ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಎನ್‌ಎಂಡಿಸಿ ಸಂಸ್ಥೆಯ ಸಿಎಸ್ಆರ್ ಅನುದಾನದಿಂದ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾಗಿರುವ ಅತ್ಯಾಧುನಿಕ ಎಂಆರ್‌ಐ ಸ್ಕ್ಯಾನಿಂಗ್ ಕೇಂದ್ರವನ್ನು ಉದ್ಘಾಟಿಸಿದರು.
ಸಂಸದರು ಮಾತನಾಡಿ, “ಇಂದಿನ ಜೀವನಶೈಲಿಯಲ್ಲಿ ಬದಲಾವಣೆ ಅಗತ್ಯವಾಗಿದೆ. ಪೌಷ್ಠಿಕ ಆಹಾರ, ನಿಯಮಿತ ವ್ಯಾಯಾಮ ಹಾಗೂ ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು,” ಎಂದು ಸಲಹೆ ನೀಡಿದರು. ಸಿಎಸ್ಆರ್ ಅನುದಾನ ಕಾನೂನು ಜಾರಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಕೌಶಲಾಭಿವೃದ್ಧಿಗೆ ಅನುದಾನಗಳು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿರುವುದನ್ನು ಅವರು ಉಲ್ಲೇಖಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, “ಜಿಲ್ಲೆಗೆ ಅತ್ಯುತ್ತಮ ಗುಣಮಟ್ಟದ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಲಭ್ಯವಾಗಿದ್ದು, ಬಿಪಿಎಲ್ ಕಾರ್ಡ್‌ಧಾರಕರು ಕೇವಲ ₹1150ಕ್ಕೆ ಸ್ಕ್ಯಾನಿಂಗ್ ಸೇವೆಯನ್ನು ಪಡೆಯಲಿದ್ದಾರೆ. ಈ ಕುರಿತು ತಾಲ್ಲೂಕು ಮಟ್ಟದಲ್ಲಿಯೂ ಜಾಗೃತಿ ಮೂಡಿಸಲಾಗುವುದು,” ಎಂದರು
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ ಹೇಳಿದರು: “ಸಂಸದರ ಇಚ್ಛಾಶಕ್ತಿ ಮತ್ತು ಜಿಲ್ಲಾಡಳಿತದ ಸಹಕಾರದಿಂದ ಎನ್‌ಎಂಡಿಸಿ ಸಂಸ್ಥೆಯ ಸಿಎಸ್ಆರ್ ಅನುದಾನದಲ್ಲಿ ಆಧುನಿಕ ಎಂಆರ್‌ಐ ಯಂತ್ರವನ್ನು ಒದಗಿಸಲಾಗಿದೆ. ಇದು ಮೂಳೆ ಹಾಗೂ ನರಸಂಬಂಧಿತ ಸಮಸ್ಯೆಗಳ ನಿಖರ ಸ್ಕ್ಯಾನಿಂಗ್‌ಗಾಗಿ ಉಪಯುಕ್ತವಾಗಲಿದೆ,” ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಗುಣಮಟ್ಟದ ಸ್ಕ್ಯಾನಿಂಗ್ ಕವರ್‌ಗಳನ್ನೂ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ. ಬಾಬು ಜಗನ್ ಬದುಕು ರಾಮ್ ಚರ್ಮ ಕೈಗಾರಿಕಾ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಎನ್‌ಎಂಡಿಸಿ ಜನರಲ್ ಮ್ಯಾನೇಜರ್ ಚಟರ್ಜಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ನಂತರ ಸಂಸದರು ನಗರದ ರಾಘವೇಂದ್ರ ಕಾಲೋನಿಯಲ್ಲಿ ಸಂಸದ ನಿಧಿಯಿಂದ ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆದರ್ಶ ಪಾರ್ಕ್‌ನಲ್ಲಿನ ಪೇವರ್ ಅಳವಡಿಕೆ ಕೆಲಸ ಮತ್ತು ಪಿರಮಿಡ್ ಯೋಗ ಕೇಂದ್ರವನ್ನು ಪರಿಶೀಲಿಸಿದರು.
