ವರದಿಗಾರರು :
ಈ.ಮಂಜುನಾಥ ||
ಸ್ಥಳ :
ಹೊಸಪೇಟೆ
ವರದಿ ದಿನಾಂಕ :
25-11-2025
“ಕಂಪನಿ ಪರ ಗ್ರಾಮಸ್ಥರ ಏಕತೆ: 10 ಹಳ್ಳಿಗಳಿಂದ ತಹಸೀಲ್ದಾರ್‌ರಿಗೆ ಮನವಿ”
ಎಸ್.ಎಲ್.ಆರ್ ಮೆಟಾಲಿಕ್ಸ್ ಲಿಮಿಟೆಡ್ ಕಂಪನಿಯ ವಿರುದ್ಧ ಕರ್ನಾಟಕ ಮಹಾ ಜನಸೇನೆ ಸಂಘ ಇತ್ತೀಚೆಗೆ ನಡೆಸಿದ ಮುಷ್ಕರವನ್ನು ಕಟುವಾಗಿ ಖಂಡಿಸಿರುವ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳ ನಿವಾಸಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಕಂಪನಿಗೆ ಬೆಂಬಲ ಸೂಚಿಸಿದ್ದಾರೆ. ಸುಮಾರು 400ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಒಂದೇ ವೇದಿಕೆಯಲ್ಲಿ ಸೇರಿಕೊಂಡು ತಮ್ಮ ಅಭಿಪ್ರಾಯವನ್ನು ಆಡಳಿತದ ಮುಂದೆ ವ್ಯಕ್ತಪಡಿಸಿದರು. ಗ್ರಾಮಸ್ಥರು ತಮ್ಮ ಮನವಿಯಲ್ಲಿ, “ಮಹಾ ಜನಸೇನೆ ಸಂಘದ ಮುಷ್ಕರ ಅನಗತ್ಯ. ಇದು ಗ್ರಾಮಸ್ಥರ ಜೀವನೋಪಾಯಕ್ಕೆ ಧಕ್ಕೆ ತರಲಿದೆ,” ಎಂದು ಹೇಳಿದ್ದಾರೆ.
ಕಂಪನಿ ಹಲವು ವರ್ಷಗಳಿಂದ ಉದ್ಯೋಗ, ಕುಡಿಯುವ ನೀರು, ರಸ್ತೆ, ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಸಿಎಸ್‌ಆರ್ ಚಟುವಟಿಕೆಗಳ ಮೂಲಕ ಪ್ರದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವುದನ್ನು ಅವರು ಸ್ಪಷ್ಟಪಡಿಸಿದರು. “ಕಾರ್ಖಾನೆ ಇರುವುದರಿಂದ ಸಾವಿರಾರು ಕುಟುಂಬಗಳು ಬದುಕನ್ನು ಕಟ್ಟಿಕೊಂಡಿವೆ. ಯಾವುದೇ ಸಮಸ್ಯೆ ಇದ್ದರೆ ಮನವಿ ಮಾಡಿದರೆ ತಕ್ಷಣ ಪರಿಹಾರ ನೀಡಲಾಗುತ್ತಿದೆ. ಕೆಲವರ ವೈಯಕ್ತಿಕ ಹಿತಾಸಕ್ತಿ ಆಧರಿಸಿದ ಬೇಡಿಕೆಗಾಗಿ ಮುಷ್ಕರ ಮಾಡುವುದು ಅಸಮಂಜಸ,” ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಂಪನಿಯ ವಿರುದ್ಧ ನಡೆಯುತ್ತಿರುವ ಮುಷ್ಕರಕ್ಕೆ ಪರ್ಯಾಯವಾಗಿ, ಕಂಪನಿಯ ಬೆಂಬಲಕ್ಕಾಗಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಬೇಕು ಎಂದು ಅವರು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಶ್ರೀಮತಿ ಕವಿತಾ ಅವರು, ವಿಷಯವನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುತ್ತಿದ್ದು, ಕಾನೂನುಸಮ್ಮತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರ ಕಡೆ ಈಗ ಗ್ರಾಮಸ್ಥರ ಕಣ್ಣು ನೆಟ್ಟಿವೆ.
