ವರದಿಗಾರರು :
- ಕೆಂಡೇಶ್ ಸೂರ್ಯ ||
ಸ್ಥಳ :
ಹುಣಸೂರು*
ವರದಿ ದಿನಾಂಕ :
27-11-2025
ಹನುಮ ಜಯಂತಿ ಮೆರವಣಿಗೆ ಶಾಂತಿಯುತವಾಗಿರಲಿ: ಎಸ್.ಪಿ. ವಿಷ್ಟುವರ್ದನ್ ಮನವಿ
ಹುಣಸೂರು: ಡಿಸೆಂಬರ್ 4ರಂದು ನಡೆಯಲಿರುವ ಹನುಮ ಜಯಂತಿ ಮೆರವಣಿಗೆಯನ್ನು ಸೌಹಾರ್ದಯುತವಾಗಿ, ಶಾಂತಿಯುತವಾಗಿ ಆಚರಿಸಲು ಎಲ್ಲ ವರ್ಗದ ನಾಗರಿಕರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಟುವರ್ದನ್ ಮನವಿ ಮಾಡಿದರು. ನಗರ ಠಾಣೆಯಲ್ಲಿ ಸೋಮವಾರ ಆಯೋಜಿಸಿದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹುಣಸೂರು ಸದಾ ಶಾಂತಿಪ್ರಿಯರ ಊರಾಗಿ ಹೆಸರುವಾಸಿಯಾಗಿದೆ ಎಂದು ಹೇಳಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಡಿ.ಜೆ. ನಿಷೇಧ – ಜಾನಪದ ಕಲೆಗೆ ಆದ್ಯತೆ ಮೆರವಣಿಗೆಯಲ್ಲಿ ಡಿ.ಜೆ. ಪರಿಕರಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬದಲಾಗಿ ಜಾನಪದ ಕಲಾತಂಡಗಳು, ಡೊಳ್ಳು ಕುಣಿತ, ತಮಟೆ ಸೇರಿದಂತೆ ಸಾಕಷ್ಟು ಪರಂಪರೆಯ ಕಲಾವಿದರನ್ನು ಆಮಂತ್ರಿಸಲು ಸಲಹೆ ನೀಡಿದರು. ಬ್ಯಾನರ್ ಮತ್ತು ಬಂಟಿಂಗ್‌ಗಳನ್ನು ಅಳವಡಿಸಿದರೆ ಅವನ್ನು ತೆರವುಗೊಳಿಸುವ ಜವಾಬ್ದಾರಿಯೂ ಆಯೋಜಕರ ಮೇಲಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ಅಗತ್ಯ ಜಯಂತಿ ವೇಳೆಯಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಸಂಭವನೀಯ. ಸುಳ್ಳು ಸುದ್ದಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕೆಂದು ಎಸ್.ಪಿ. ಎಚ್ಚರಿಸಿದರು. ಸಂದೇಶಗಳ ಸತ್ಯಾಸತ್ಯತೆ ಕುರಿತು ಅನುಮಾನವಿದ್ದಲ್ಲಿ ಬೀಟ್ ಪೊಲೀಸ್ ಅಥವಾ ಅಧಿಕಾರಿಗಳೊಂದಿಗೆ ಪರಿಶೀಲಿಸಿ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಹೇಳಿದರು. ಮೆರವಣಿಗೆಯ ಸುಸೂತ್ರ ನಿರ್ವಹಣೆಗೆ ಕನಿಷ್ಠ 150 ಸ್ವಯಂಸೇವಕರನ್ನು ನೇಮಿಸಿಕೊಳ್ಳುವಂತೆ ಸಮಿತಿಗೆ ಸಲಹೆ ನೀಡಿದರು.
ಮೂರು ದಿನಗಳ ಹನುಮೋತ್ಸವ ಕಾರ್ಯಕ್ರಮ ತಾಲೂಕು ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್. ದಾಸ್ ಮಾತನಾಡಿ, ಮೂರು ದಿನಗಳ ಜಯಂತಿ ಕಾರ್ಯಕ್ರಮ ವಿವರಿಸಿದರು. ಡಿ.2: ಹನುಮ ಪ್ರತಿಷ್ಠಾಪನೆ ಡಿ.3: ಸಾಂಸ್ಕೃತಿಕ ಕಾರ್ಯಕ್ರಮ ಡಿ.4: ಮೆರವಣಿಗೆ — ಬೆಳಗ್ಗೆ 11 ಗಂಟೆಗೆ ನಗರದ ರಂಗನಾಥ ಬಡಾವಣೆಯಿಂದ ಆರಂಭವಾಗಿ ಕಲ್ಕುಣಿಕೆ ವೃತ್ತ, ಶಬರಿಪ್ರಸಾದ್ ವೃತ್ತ, ಹಳೆಯ ಸೇತುವೆ, ಸಂವಿಧಾನ ವೃತ್ತ, ಎಸ್‌ಜೆ ರಸ್ತೆ, ಎಚ್.ಡಿ. ಕೋಟೆ ವೃತ್ತ, ಜೆಎಲ್‌ಬಿ–ಬಜಾರ್ ರಸ್ತೆ, ಹೊಸ ಬಸ್ ನಿಲ್ದಾಣ ಮತ್ತು ಕಲ್ಪತರು ವೃತ್ತಗಳ ಮೂಲಕ ಆಂಜನೇಯಸ್ವಾಮಿ ದೇವಾಲಯದ ಆವರಣಕ್ಕೆ ಸಂಜೆ ತಲುಪಲಿದೆ. 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಭಾಗವಹಿಸಲಿದ್ದು, ಮಜ್ಜಿಗೆ, ತಂಪುಪಾನೀಯ, ಉಪಹಾರಗಳನ್ನು ಸಾರ್ವಜನಿಕರು ಭಕ್ತರಿಗೆ ನೀಡಲಿದ್ದಾರೆ ಎಂದು ತಿಳಿಸಿದರು.
ಸೌಹಾರ್ದಕ್ಕೆ ಆದ್ಯತೆ ನೀಡಿ – ತಹಸೀಲ್ದಾರ್ ತಹಸೀಲ್ದಾರ್ ಜೆ. ಮಂಜುನಾಥ್ ಮಾತನಾಡಿ, ವಾಟ್ಸಾಪ್–ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿಗೆ ಮಹತ್ವ ಕೊಡದೆ, ಸೌಹಾರ್ದತೆಯನ್ನು ಕಾಪಾಡಿಕೊಂಡು ಜಯಂತಿ ಆಚರಿಸೋಣ ಎಂದು ಮನವಿ ಮಾಡಿದರು. ಸಭೆಯಲ್ಲಿ ಹನುಮಂತೋತ್ಸವ ಗೌರವಾಧ್ಯಕ್ಷ ಎಚ್.ವೈ. ಮಹದೇವ್, ಖಾಲಿದ್, ನಗರಸಭೆ ಮಾಜಿ ಸದಸ್ಯ ಕೃಷ್ಣರಾಜ ಗುಪ್ತ, ಸೈಯದ್ ಯೂನೂಸ್, ಸಾಗರ್ ಬಾಗಲ್, ಅನಿಲ್ ಕುಮಾರ್, ವರದರಾಜ ಪಿಳ್ಳೆ, ರಾಘು ಕಲ್ಕುಣಿಕೆ, ಸಲ್ಮಾನ್, ಇಮ್ರಾನ್, ಅಯೂಬ್, ನಯಾಜ್, ಮುಜಾಮಿಲ್, ಸುಹೇಲ್, ಡಿವೈಎಸ್‌ಪಿ ರವಿ, ನಗರ ಠಾಣೆ ಇನ್ಸ್പೆಕ್ಟರ್ ಸಂತೋಷ್ ಕಶ್ಯಪ್, ನಗರಸಭೆ ಪರಿಸರ ಇಂಜಿನಿಯರ್ ಸೌಮ್ಯ ಹಾಗೂ ಹಲವರು ಭಾಗವಹಿಸಿದರು.
