ಫಲಿತಾಂಶ ಸುಧಾರಣೆ ಶಿಕ್ಷಕರ ಮೊದಲ ಆದ್ಯತೆ: ಪ್ರಧಾನ ಕಾರ್ಯದರ್ಶಿ
ರಾಯಚೂರು, ನವೆಂಬರ್ 18 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ಪ್ರದೇಶ ಹಾಗೂ ಧಾರವಾಡ ವಿಭಾಗದ ಆರು ಜಿಲ್ಲೆಗಳ ತಾಲೂಕುಮಟ್ಟದ ಆರು ವಿಷಯಗಳ ಸಂಪನ್ಮೂಲ ಶಿಕ್ಷಕರಿಗೆ ರಾಯಚೂರಿನ ಪೂರ್ಣಿಮಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ನವೆಂಬರ್ 17ರಂದು ಒಂದು ದಿನದ ವಿಶೇಷ ತರಬೇತಿ ಕಾರ್ಯಗಾರ ನೆರವೇರಿತು. ಒಟ್ಟು 190 ಸಂಪನ್ಮೂಲ ಶಿಕ್ಷಕರು ಮತ್ತು ಹಿರಿಯ ಶಿಕ್ಷಣ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವ್ಹಿ. ರಶ್ಮಿ ಮಹೇಶ್ ಅವರು ಈ ಬಾರಿ ಕಲ್ಯಾಣ ಕರ್ನಾಟಕ ಭಾಗದ SSLC ಫಲಿತಾಂಶವನ್ನು ಸುಧಾರಿಸುವುದು ಶಿಕ್ಷಕರ ಮೊದಲ ಆದ್ಯತೆ ಆಗಬೇಕು ಎಂಬ ಸೂಚನೆ ನೀಡಿದರು. ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳ ಪರಿಚಯ, ಪಠ್ಯ ಆಧಾರಿತ ಮೌಲ್ಯಮಾಪನ ಅರಿವು, ಹಾಗೂ ಜನವರಿ–ಫೆಬ್ರುವರಿಯಲ್ಲಿ ನಡೆಸಲಿರುವ ಪೂರ್ವ ಸಿದ್ಧತಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಹೇಳಿದರು.
ಅಪರ ಆಯುಕ್ತ ರಾಹುಲ್ ತುಕಾರಾಮ ಅವರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕಾರ್ಯಯೋಜನೆಗೆ ಒಳಪಡಿಸಿ, ವಾರವಾರದ ಹಂತ-1 ರಿಂದ ಹಂತ-4 ರ ತನಕ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಪುನರಾವರ್ತನೆ ನಡೆಸಬೇಕು ಎಂದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಮುಖ್ಯವಾಹಿನಿಗೆ ಕರೆತರಲು ಶಿಕ್ಷಕರು ಹಾಗೂ ಅಧಿಕಾರಿಗಳು ಸಂಯುಕ್ತ ಪ್ರಯತ್ನ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ನಿತೀಶ್ ಕೆ ಅವರು ರಾಯಚೂರು ಜಿಲ್ಲೆಯ SSLC ಫಲಿತಾಂಶವನ್ನು ಕಳೆದ ವರ್ಷದಿಗಿಂತ ಉತ್ತಮಪಡಿಸಲು ಎಲ್ಲಾ ಶಾಲೆಗಳಿಗೂ ಸ್ಪಷ್ಟ ಸೂಚನೆ ನೀಡಿದರು. ಪಾಲಕರ ಸಭೆ, ನಿರಂತರ ಫಾಲೋ-ಅಪ್, ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ಅಗತ್ಯವೆಂದು ತಿಳಿಸಿದರು.
ಈ ಕಾರ್ಯಗಾರದಲ್ಲಿ ನಾಲ್ಕು ಜಿಲ್ಲೆಗಳ ಪ್ರತಿ ತಾಲೂಕಿನಿಂದ ಆರು ವಿಷಯಗಳ ಸಂಪನ್ಮೂಲ ಶಿಕ್ಷಕರು ಪಾಲ್ಗೊಂಡು 12 ವಾರಗಳ ಫಲಿತಾಂಶ ಸುಧಾರಣೆ ಕಾರ್ಯಯೋಜನೆ ರೂಪಿಸಿದರು. DIET ಉಪನ್ಯಾಸಕರು, ಶಿಕ್ಷಣಾಧಿಕಾರಿಗಳು, ಪರಿವೀಕ್ಷಕರು ಹಾಗೂ ಹಿರಿಯ ಅಧಿಕಾರಿಗಳು ಸೇರಿ ಒಟ್ಟಾರೆ 190 ಮಂದಿ ಭಾಗವಹಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು