ವರದಿಗಾರರು :
ರಮೇಶ್ ಅಂಗಡಿ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
25-11-2025
ಭಕ್ತಿಭಾವದಿಂದ ಜರುಗಿದ ವಿದ್ಯಾಗಿರಿಯ ಈಶ್ವರ ಕಾರ್ತಿಕೋತ್ಸವ
ಬಾಗಲಕೋಟೆ: ಕಾರ್ತಿಕ ಮಾಸದ ನಿಮಿತ್ಯ ವಿದ್ಯಾಗಿರಿಯ ವಿಜಯನಗರ ಬಡಾವಣೆಯ ಶ್ರೀ ಈಶ್ವರ ದೇವರ ಕಾರ್ತಿಕೋತ್ಸವ ಭಕ್ತಿ ಭಾವ, ಸಂಭ್ರಮ ಹಾಗೂ ಸಡಗರದಿಂದ ಅದ್ದೂರಿಯಾಗಿ ಜರುಗಿತು. ವಿಜಯನಗರ ಬಡಾವಣೆಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ದೇವಸ್ಥಾನ ಸಮಿತಿಯ ವತಿಯಿಂದ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ರುದ್ರಪಠಣ, ಮಹಾಮೃತ್ಯುಂಜಯ ಮಂತ್ರ ಪಠಣ ಹಾಗೂ ಪುಷ್ಪಾಲಂಕಾರ ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿ ನಡೆಯಿತು.
ಸಂಜೆಯಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಮುಚಖಂಡಿಯ ಪ್ರಧಾನ ಅರ್ಚಕರಾದ ಪ್ರಭುಸ್ವಾಮಿ ಸರಗಣಾರಿ ಅವರು ದೀಪಗಳನ್ನು ಬೆಳಗುವ ಮೂಲಕ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಕುಮಾರಸ್ವಾಮಿ ಹಿರೇಮಠ (ಚಿತ್ತರಗಿ), ವಿ. ಆರ್. ಶಿರೋಳ ಹಾಗೂ ಈಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರಪ್ಪ ಕರ್ಜಗಿ, ಕಾರ್ಯದರ್ಶಿ ಬಸವರಾಜ ಚಿನಿವಾಲರ್, ಎಸ್.ವಿ. ಚೌಡಾಪುರ, ಮಲ್ಲಿಕಾರ್ಜುನ ಕಂಬಳಿ, ಮನೋಹರ ಬ್ಯಾಹಟ್ಟಿ, ಯಲ್ಲಪ್ಪ ಮ್ಯಾಗಿ, ಹಂಪಣ್ಣ ಅಂಗಡಿ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಬಡಾವಣೆಯ ಹಿರಿಯರು, ವಿದ್ಯಾಗಿರಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಸಫಲಗೊಳಿಸಿದರು. ಕಾರ್ತಿಕ ಮಾಸದ ದೀಪಾಲಂಕಾರದಿಂದ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶವು ಹಬ್ಬದ ಸಂಭ್ರಮದಲ್ಲಿ ಮಿನುಗಿತು.
