ವರದಿಗಾರರು :
ಮೖಬೂಬ ಬಾಶಾ ಮನಗೂಳಿ, ||
ಸ್ಥಳ :
ಬಸವನ ಬಾಗೇವಾಡಿ
ವರದಿ ದಿನಾಂಕ :
02-12-2025
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಧಿಸಿದ ಜಿಲ್ಲೆ ಪ್ರವೇಶ ನಿಷೇಧಕ್ಕೆ ಬಸವನ ಬಾಗೇವಾಡಿಯಲ್ಲಿ ಪ್ರತಿಭಟನ
ವಿಜಯಪುರ ಜಿಲ್ಲೆಯ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗೆ ಸರ್ಕಾರ ವಿಧಿಸಿರುವ ಜಿಲ್ಲೆ ಪ್ರವೇಶ ನಿಷೇಧ ಆದೇಶವನ್ನು ತೀವ್ರವಾಗಿ ಖಂಡಿಸಿ, ಅದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಬಸವನ ಬಾಗೇವಾಡಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಮೆರವಣಿಗೆ ಬಸವ ಸ್ಮಾರಕದಿಂದ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗುತ್ತಾ ಬಸವೇಶ್ವರ ವೃತ್ತಕ್ಕೆ ತಲುಪಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಮತ್ತು ಸಂಘಟನೆಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ರಾಘವೇಂದ್ರ ಅಣ್ಣಿಗೇರಿ ಅವರು, “ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ನೈಸರ್ಗಿಕ ಕೃಷಿ, ಸೇವಾ ಚಟುವಟಿಕೆಗಳು ಹಾಗೂ ಗುರುಕುಲ ಶಿಕ್ಷಣ ಪದ್ಧತಿಗಳ ಮೂಲಕ ಸಮಾಜ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಇಂತಹ ಸಂತರ ಮೇಲೆ ‘ದಂಗೆಗೆ ಕಾರಣರಾಗಬಹುದು’ ಎಂಬ ಸರ್ಕಾರದ ಆರೋಪ ಎಲ್ಲರನ್ನೂ ಅಚ್ಚರಿ ಗೊಳಿಸಿದೆ. ಸುಳ್ಳು ಆರೋಪ ಆಧರಿಸಿ ಪ್ರವೇಶ ನಿರ್ಬಂಧ ವಿಧಿಸಿರುವುದು ಅಸಹನೀಯ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರು ಮುಂದುವರಿದು, “ಸರ್ಕಾರ ಸಮಾಜ ಕಟ್ಟುವ ಕೆಲಸ ಮಾಡಬೇಕೇ ಹೊರತು ಸಮಾಜ ಒಡೆಯುವ ಕೆಲಸ ಮಾಡಬಾರದು. ಈ ಆದೇಶ ಹಿಂಪಡೆಯದಿದ್ದರೆ ಬರುವ ದಿನಗಳಲ್ಲಿ ನಾವು ಗಟ್ಟಿಯಾದ ಹೋರಾಟ ನಡೆಸುವಂತೆ ಮಾಡುತ್ತದೆ,” ಎಂದು ಎಚ್ಚರಿಕೆ ನೀಡಿದರು.
ಹಲವು ಸಂಘಟನೆಗಳ ನಾಯಕರು ಸ್ವಾಮೀಜಿಗಳ ಪರವಾಗಿ ಮಾತನಾಡಿ ಸರ್ಕಾರದ ಕ್ರಮವನ್ನು ಖಂಡಿಸಿದರು. ನಂತರ, ಜಿಲ್ಲೆ ಪ್ರವೇಶ ನಿಷೇಧ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಗ್ರೇಡ್–2 ತಹಶೀಲ್ದಾರ್ ಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು: ಪೂಜ್ಯ ಗಿರಿಶಾನಂದ ಸ್ವಾಮೀಜಿ, ರಾಘವೇಂದ್ರ ಅಣ್ಣಿಗೇರಿ, ಶಿವಪುತ್ರ ಸ್ವಾಮಿಗಳು, ಮಂಜುಳಾ ಮಾತಾಜಿ, ಅಶೋಕ ಹಾರಿವಾಳ, ಕಲ್ಲು ಸೊನ್ನದ್, ಪರಶುರಾಮ್ ಅಡಗಿಮಣಿ, ಬಸಲಿಂಗ ನಂದಿ, ಬಸವರಾಜ್ ಗಚ್ಚಿನಮಠ, ವಿನುತ ಕಲ್ಲೂರು, ಮಣಿಕಂಠ ಕಲ್ಲೂರು ಸೇರಿದಂತೆ ಊರಿನ ಅನೇಕ ಮುಖಂಡರು ಮತ್ತು ಭಕ್ತರು.
