ವರದಿಗಾರರು :
ಮಲ್ಲಿಕಾರ್ಜುನ ಬಿ ಎಚ್ ||
ಸ್ಥಳ :
ಕಲಬುರಗಿ
ವರದಿ ದಿನಾಂಕ :
15-11-2025
“ವಚನ ಚಾರಿಟೇಬಲ್ ಸೊಸೈಟಿ: ನಾಟಕೋತ್ಸವದಲ್ಲಿ ಸಮಾಜ ಜಾಗೃತಿ ಕರೆ”
ವಚನ ಚಾರಿಟೇಬಲ್ ಸೊಸೈಟಿ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ರಾಂತಿಕಾರಕ ಕಾರ್ಯ ಶ್ಲಾಘನೀಯ ಎಂದು ಶರಣ ಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಪ್ರಶಂಸಿಸಿದರು. ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಹಾಗೂ ಶಿವಶರಣ ಹರಳಯ್ಯ ನಾಟಕೋತ್ಸವದಲ್ಲಿ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು.
ಮಾತನಾಡಿದ ಅವರು, ನಾಟಕ ಕಲೆ–ಸಾಹಿತ್ಯ–ಸಂಸ್ಕೃತಿಯನ್ನು ಅರಿಯುವ ಸುಲಭ ದಾರಿ, ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮೃದ್ಧಿ ಸಾಧ್ಯ ಎಂದು ಹೇಳಿದರು.
ವಚನ ಟಿವಿಯ ಪ್ರಧಾನ ಸಂಪಾದಕ ಪ್ರೊ. ಸಿದ್ದು ಯಾಪಲಪರವಿ, “ಕನ್ನಡ ವಿಶ್ವದ ಶ್ರೇಷ್ಠ ಭಾಷೆಗಳಲ್ಲಿ ಒಂದು. ವಚನಗಳು ಕನ್ನಡದ ಚಿಂತನೆಗೆ ಮೂಳೆಸೇರಿದ ಶಕ್ತಿ. ವಚನ ಸಮೂಹ ಸಂಸ್ಥೆ 15 ವರ್ಷಗಳಿಂದ ನಿಷ್ಠಾವಂತ ಸೇವೆ ಸಲ್ಲಿಸುತ್ತಿದೆ” ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ನಾಟಕಗಳು ಮನಸ್ಸನ್ನು ಕಟ್ಟುವ ಸಾಂಸ್ಕೃತಿಕ ಉತ್ಸವಗಳಾಗಿವೆ. ಬಸವಾದಿ ಶರಣರು ಭಾಷೆ, ಬಾಂಧವ್ಯ, ಪರಂಪರೆಗಳಿಗೆ ಬಲ ನೀಡಿದ ಕ್ರಾಂತಿಕಾರರು ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಹೊಸ ಪೀಳಿಗೆಗೆ ವಚನ-ಕನ್ನಡ ಚಿಂತನೆಯ ಪರಿಚಯ ಅಗತ್ಯ. “ಎ–ಅಲ್ಲಮ, ಬಿ–ಬಸವ…” ಎಂಬ ಶೈಕ್ಷಣಿಕ ಜೊಡಣೆ ಮಕ್ಕಳಲ್ಲಿ ಹೊಸ ಚಿಂತನೆ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಾಧ್ಯಕ್ಷರಾಗಿ ಮಾತನಾಡಿದ ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲ್ಲಮಪ್ರಭು ನಾವದಗೇರೆ, ಬರುವ 20 ಡಿಸೆಂಬರ್ 2027ರಂದು ಅನುಭವ ಮೆಗಾಸಿಟಿ ಲೋಕಾಪ್ರಣೆಗೆ ದೇಶದಾದ್ಯಂತದ 1,96,000 ಜನರನ್ನು ಸೇರಿಸುವ ಗುರಿ ಹೊಂದಿದ್ದೇವೆ. ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಪೂಜ್ಯ ಕೋರಣೇಶ್ವರ ಸ್ವಾಮಿಗಳು ಹಾಗೂ ತೋಂಟದಾರ್ಯ ಅನುಭವಮಂಟಪ ಆಳಂದ ಸ್ವಾಮಿಗಳು ಆಶೀರ್ವಚನ ನೀಡಿ, ಸೌಹಾರ್ದತೆ ಮತ್ತು ಒಗ್ಗಟ್ಟು ಸಮಾಜದ ಪ್ರಗತಿಯ ಆಧಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ವಿಲಾಸವತಿ ಖುಬಾ ಅವರು ಜಗನ್ಮಾತೆ ಅಕ್ಕ ಮಹಾದೇವಿ ಚಲನಚಿತ್ರದ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಆರ್.ಜಿ. ಶೆಟಗಾರ, ಭೀಮಣ್ಣಾ ಬೋನಾಳ, ನಂದಿಕಾಶಿನಾಥ ದಿವಾಂಟಗಿ, ಡಾ. ಚಿತ್ರಶೇಖರ ವಾಗರಗಿ, ಶಿವಶಂಕರ ಟೋಕರೆ, ಶಿವಕುಮಾರ ಸಾಲಿ, ಬಾಬುರಾವ ಪಾಟೀಲ, ಶಿವಲಿಂಗಪ್ಪ ಗಣಪತಿ, ಅಶೋಕ ಘೂಳೆ, ರಾಜಶೇಖರ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.
ಕಲ್ಯಾಣನಾಡು ಗ್ರಾಮೀಣ ಜನಪದ ಕಲಾ ಸಂಘದ ನಾಡಗೀತೆ ಮತ್ತು ಸಂಗೀತ ಕಾರ್ಯಕ್ರಮದಿಂದ ಚಾಲನೆಗೊಂಡ ಕಾರ್ಯಕ್ರಮವನ್ನು ರವೀಂದ್ರ ಶಾಬಾದಿ ಪ್ರಾಸ್ತಾವಿಕ ನುಡಿದರು; ಬಸವರಾಜ ಮೊರಬದ ಸ್ವಾಗತಿಸಿದರು; ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು; ಅಂಬರಾಯ ಬಿರಾದರ ವಂದಿಸಿದರು. ಅಂತಿಮವಾಗಿ ಸಿರಗುಪ್ಪದ ಧಾತಿ ಸಂಸ್ಥೆ ಶಿವಶರಣ ಹರಳಯ್ಯ ನಾಟಕವನ್ನು ಪ್ರದರ್ಶಿಸಿತು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
